ನೀವಿಯಸ್, ನಿಯಸ್

ಕಾಲ ಕ್ರಿ.ಪೂ. ಸುಮಾರು 270-199. ನಿಶ್ಚಯವಾಗಿ ರೋಮನ್ ಕವಿಗಳ ಸಾಲಿನಲ್ಲಿ ಕಾಲಮಾನದಿಂದ ಒಂದನೆಯವ. ಕಾರ್ತೇಜಿನೊಡನೆ ರೋಮು ನಡೆಸಿದ ಮೊದಲನೆಯ ಯುದ್ಧದಲ್ಲಿ ನೀವಿಯಸ್ ಯೋಧನಾಗಿದ್ದ. ಕದನ ಕ್ಷೇತ್ರ ಸಿಸಿಲಿಯ ಪಶ್ಚಿಮ ಭಾಗ ಆಗಿತ್ತಾಗಿ, ಸಿಸಿಲಿಯ ಗ್ರೀಕರ ಸಾಹಚರ್ಯ ಇವನಿಗೂ ಇವನ ಜೊತೆಯವರಿಗೂ ಲಭಿಸಿತು. ಇವನ ಪ್ರಥಮ ನಾಟಕ ಕ್ರಿ.ಪೂ. 235ರಂದು ಪ್ರದರ್ಶನಗೊಂಡಿತೆಂದು ಊಹಿಸಿದ್ದಾರೆ. ಅಲ್ಲಿಂದ ಮುಂದೆ ಸುಮಾರು 30 ವರ್ಷ ಈತ ಗಂಭೀರನಾಟಕ, ಹರ್ಷನಾಟಕಗಳನ್ನು ಹೊರತಂದ. ಹೋಮರನ ಕಾವ್ಯಗಳ ಪ್ರತೀತಿ ಆ ಸಮಯದಲ್ಲಿ ರೋಮಿನಲ್ಲಿ ಹೆಚ್ಚಾಗಿತ್ತು; ಅದರಲ್ಲೂ ಟ್ರಾಯ್‍ನ ಯುದ್ಧಕ್ಕೆ ಸಂಬಂಧಿಸಿದ ಕಥೆಗಳು ತುಂಬ ಆಕರ್ಷಕವಾಗಿದ್ದವು. ಆಂಡ್ರೊಮ್, ಹೆಕ್ಟರ್, ಟ್ರೋಜನ್ ಕುದುರೆ ಮೊದಲಾದ ಗಂಭೀರ ನಾಟಕಗಳನ್ನು ನೀವಿಯಸ್ ರಚಿಸಿಕೊಟ್ಟ. ಅಲ್ಲದೆ ಗ್ರೀಕ್ ಮಾದರಿಯನ್ನು ಅನುಸರಿಸಿ 34ಕ್ಕೂ ಹೆಚ್ಚು ವಿನೋದ ನಾಟಕಗಳನ್ನು ಬರೆದ. ಅವುಗಳಲ್ಲಿಯೇ ಇವನಿಗೆ ಸಹಜವೂ ಬಲಿಷ್ಠವೂ ಆದ ಆಸಕ್ತಿ ಇದ್ದಂತೆ ತೋರುತ್ತದೆ. ಸ್ವಾಭಾವಿಕವಾಗಿ ವಿಡಂಬನಕಾರನಾದ್ದರಿಂದ ಕಾಮಿಡಿಯೇ ಹೆಚ್ಚು ಅವಕಾಶ ಕೊಡುವ ಮಾಧ್ಯಮವಾಯಿತು. ರೋಮಿನ ಮೂಲ ಪುರುಷರೆಂದು ಐತಿಹ್ಯ ಪ್ರಸಿದ್ಧರಾದ ರಾಮ್ಯುಲಸ್ ಮತ್ತು ರೀಮಾಸರನ್ನು ಕುರಿತ ಒಂದು ವಿಶಿಷ್ಟ ಪ್ರಕಾರದ ರೂಪಕವನ್ನೂ ಈತ ನಿರ್ಮಿಸಿದ.

ನೀವಿಯಸ್ ಸಾಮಾನ್ಯ ಜನರ ಗುಂಪಿಗೆ ಸೇರಿದವ, ಪ್ಲಬೀಯಸ್ ವರ್ಗದವ. ಶ್ರೀಮಂತರೂ ಸೆನೆಟ್ ಸದಸ್ಯರೂ ಆದ ಪಟ್ರಿಷಿಯನ್ ವರ್ಗದವರ ಮೇಲೆ ಇವನಿಗೆ ಕೋಪ ದ್ವೇಷ. ಸಮಯ ದೊರೆತಾಗಲೆಲ್ಲ ಅವರನ್ನು ತನ್ನ ನಾಟಕಗಳಲ್ಲಿ ಅವಹೇಳನೆಗೆ ಗುರಿ ಮಾಡುತ್ತಿದ್ದ. ಕ್ರಿ.ಪೂ. 206ರಲ್ಲಿ ಉಚ್ಚ ವಂಶಸ್ಥರಾದ ಕ್ವಿಂಟಸ್ ಸಿಸಿಲಿಯನ್ ಮೆಟಲಸ್ ರೋಮಿನ ಮುಖ್ಯಾಧಿಕಾರವಾದ ಕಾನ್ಸಲ್ ಪದವಿಯಲ್ಲಿದ್ದ. ಅವನ ತರುವಾಯ ಅವನ ಸಹೋದರನೆ ಆ ಪದವಿಗೆ ಏರುತ್ತಾನೆಂಬ ಹಂಚಿಕೆ ಅನೇಕರಿಗೆ ಇತ್ತು. ಅಂಥ ಆಗಿಕೆಯನ್ನು ಸಹಿಸಲಾರದೆ ಮೆಟಲಸ್ಸರು ಕಾನ್ಸಲುಗಳಾಗುವುದು ರೋಮಿನ ಅದೃಷ್ಟ ಎಂಬ ಅಣಕ ನುಡಿಯನ್ನು ಈತ ಆಡಿದ. ಅದಕ್ಕೆ ಪ್ರತ್ಯುತ್ತರವಾಗಿ ಅವರು ಕವಿ ನೀವಿಯಸ್ಸನಿಗೆ ಮೆಟಲಸ್‍ಗಳೇ ದುರದೃಷ್ಟ ಎಂಬ ನೇರ ಬೆದರಿಕೆಯನ್ನು ಘೋಷಿಸಿ, ಕ್ಷಿಪ್ರದಲ್ಲಿಯೇ ಇವನನ್ನು ಸೆರೆಮನೆಗೆ ದೂಡಿಸಿದರು. ಕಾರಾಗೃಹದಲ್ಲಿ ಇವನಿಗೆ ಕೊಂಚ ಲೌಕಿಕ ವಿವೇಕ ಉಂಟಾಯಿತೋ ಏನೋ ಶ್ರೀಮಂತರವನ್ನು ತೆಗಳುವ ಅಭ್ಯಾಸಕ್ಕೆ ಪಶ್ಚಾತ್ತಾಪ ಸೂಚಿಸುವ ಹರಿಯೋಲಸ್ ಮತ್ತು ಲಿಯನ್ ಎಂಬ ಎರಡು ನಾಟಕಗಳನ್ನು ಬರೆದ. ಅವುಗಳಿಂದಲೂ ಜನತೆಯ ಪ್ರತಿನಿಧಿಗಳ ಮಧ್ಯಸ್ಥಿಕೆಯೆಂದಲೂ ಇವನಿಗೆ ಬಿಡುಗಡೆ ಆಯಿತು. ಆದರೇನು? ಹೆಚ್ಚು ದಿವಸ ರೋಮಿನಲ್ಲಿ ಇರಲು ಅನುಕೂಲವಾಗಲಿಲ್ಲ. ದೇಶಭ್ರಷ್ಟತ್ವ ಇವನ ಪಾಲಿಗೆ ಬಂತು. ಕಾರ್ತೇಜಿನ ಯೂಬೆಕಾಕ್ಕೆ ಹೋಗಿದ್ದು, ಅಲ್ಲಿಯೇ ಸತ್ತುಹೋದ.

ಶ್ರೀಸಾಮಾನ್ಯನಾದರೂ ನೀವಿಯಸ್ಸಿಗೆ ದೊಡ್ಡಪ್ರಮಾಣದ ಆತ್ಮಗೌರವವಿತ್ತು. ವಿತ್ತ ಅಂತಸ್ತು ದಬ್ಬಾಳಿಕೆಗಳಿಗೆ ತಲೆ ಬಗ್ಗುವ ಚೇತನವಲ್ಲ ಅವನದ್ದು. ಮನಸ್ಸಿನಲ್ಲಿ ಇದ್ದುದನ್ನು ಹೇಳಿಬಿಡುವುದಕ್ಕೆ ಅವನೆಂದೂ ಅಂಜಿಕೆಯನ್ನು ಕಾಣ. ಸುವರ್ಣಕ್ಕಿಂತ ಸ್ವಾತಂತ್ರ್ಯ ಅಧಿಕ, ಪ್ರಜಾಪ್ರಭುತ್ವ ಇಷ್ಟು ಬೇಗ ಹಾಳಾದದ್ದು ಯಾರಿಂದ? ಅನುಸರಣೆಯ ಭಾಷಣಕಾರರಿಂದ, ಬುದ್ಧಿ ಕುಬ್ಜವಾದ ಯುವಕರಿಂದ, ನಾವು ಅನುಭವಿಸುತ್ತಿರುವ ಸ್ವಾತಂತ್ರ್ಯಕ್ಕಿಂತ ಇಲ್ಲಿ (ಈ ನಾಟಕದಲ್ಲಿ) ಇರುವ ದಾಸಲೇಸು ಇಂಥ ಧೈರ್ಯದ ಹೇಳಿಕೆಗಳು ಅವನ ಬರೆವಣಿಗೆಯಲ್ಲಿ ಮತ್ತೆ ಮತ್ತೆ ಬರುತ್ತದೆ.

	ನೀವಿಯಸ್ ರಾಷ್ಟ್ರಗೌರವಕ್ಕೆ ಅರ್ಹನೆಂಬ ಭಾವನೆ ಜನರಲ್ಲಿ ಮೂಡಿಬಂದದ್ದು. ಅವನ ನಾಟಕ ಅಥವಾ ವಿಡಂಬನೆಯಿಂದ ಅಲ್ಲ. ಯುಬೆಕಾದಲ್ಲಿ ನೆಲಸಿದಾಗ ತನ್ನ ಇಳಿವಯಸ್ಸಿನಲ್ಲಿ ಅವನು ಬರೆದ ಅಪೂರ್ವ ವಸ್ತುವಿನ ಭವ್ಯಕಾವ್ಯ ಅದಕ್ಕೆ ಕಾರಣ. ರೋಮಿಗೂ ಕಾರ್ತೇಜಿಗೂ ಆದ ಒಂದನೆಯ ಪ್ಯೂನಿಕ್ ಯುದ್ಧವೇ ಆ ಕಾವ್ಯದ ಕಥಾವಸ್ತು. ಉದ್ದವಾದ ಆ ಪದ್ಯಕಾವ್ಯವನ್ನು ವಿಮರ್ಶಕರು ಆಮೇಲೆ ಏಳು ಪರ್ವಗಳಾಗಿ ವಿಭಾಗಿಸಿದರು. ಕವಿಯ ಉದ್ದೇಶ ಧೋರಣೆ ಕಥನರೀತಿಗಳಲ್ಲೂ ಕಾವ್ಯದ ವಾತಾವರಣದಲ್ಲೂ ಚಿಕ್ಕದಾದ ಪೂರ್ವಭಾಗಕ್ಕೂ ದೊಡ್ಡದಾದ ಉತ್ತರ ಭಾಗಕ್ಕೂ ವ್ಯತ್ಯಾಸವಿದೆ. ಪೂರ್ವಭಾಗದ್ದು ಪುರಾಣಲೇಖನ ಪದ್ಧತಿ, ಉತ್ತರ ಭಾಗದ್ದು ವಾಸ್ತವಿಕ ಚರಿತ್ರೆಯ ಪದ್ಧತಿ. ಪೂರ್ವಭಾಗವೇ ಕವಿತಾದೃಷ್ಟಿಯಿಂದ ಬೆಲೆಯುಳ್ಳದ್ದು. ಅದರಲ್ಲಿ ನೀವಿಯಸ್ ರೋಮು ಕಾರ್ತೇಜುಗಳ ಪೌರಾಣಿಕ ಜನನ, ಟ್ರಾಯ್ ಪತನವಾದಾಗ ರಾಜಪುತ್ರ ಇನೀಯಸ್ ಕೈಗೊಂಡ ಸಮುದ್ರಯಾನ, ಕಾರ್ತೇಜಿನ ರಾಣಿ ಡೈಡೊ ಆಸ್ಥಾನದಲ್ಲಿ ಅವನು ಕೆಲದಿವಸ ತಳುವಿದ್ದು, ಮುಂದೆ ನಡೆದು, ಲಾಟಿಯಮ್‍ಗೆ (ಅರ್ಥಾತ್ ರೋಮಿಗ್) ಪ್ರವೇಶಿಸಿದ್ದು-ಈ ವಿಚಾರಗಳನ್ನು ಕಲ್ಪನೆ ವಿಭಾವನೆ ಕಾವ್ಯಮನೋಭಾವಗಳಿಂದ ವರ್ಣಿಸಿದ. ವಸ್ತುಸ್ಥಿತಿಯ ವರದಿಯಂತೆ ಅವನು ಬರೆಯಲಿಚ್ಛಿಸಿದರೂ ಮಿಥ್ಯೆಯ ಲಾಂಛನ ಆ ಭಾಗದ ಕುರುಹಾಗಿದೆ. ರೋಮನ್ ಮಹಾರಾಷ್ಟ್ರಕ್ಕೆ ಟ್ರಾಯ್‍ನ ಇನೀಯಸ್ ಮೂಲ ಪುರುಷನೆಂಬ ಭಾವನೆಯೂ ರೋಮು ಕಾರ್ತೇಜುಗಳ ವೈರಕ್ಕೆ ಇನೀಯಸ್-ಡೈಡೊ ಪ್ರಕರಣವೇ ಆದಿಯೆಂಬ ಭಾವನೆಯೂ ದೃಢವಾಗಿ ನಿಂತುಬಿಟ್ಟವು. ಮುಂದಣ ಕವಿಗಳಾದ ಎನ್ನಿಯಸ್ ಹಾಗೂ ವರ್ಜಿಲರಿಗೆ ಸ್ವಲ್ಪ ಸಾಮಗ್ರಿಯನ್ನು ತಯಾರಿಸಿ ಕೊಟ್ಟ ಹಿರಿಮೆ ನೀವಿಯಸ್ಸಿಗೆ ಸಲ್ಲುತ್ತದೆ. ಅಲ್ಲದೆ ರೋಮನರ ಮುಖ್ಯ ಲಕ್ಷಣಗಳಾದ ಧೈರ್ಯ ಸತ್ತ್ವ ಚಟುವಟಿಕೆ ಸ್ವಾತಂತ್ರ್ಯ ಪ್ರೇಮ ದರ್ಪಗಳನ್ನು ತನ್ನ ವೈಯಕ್ತಿಕ ಜೀವನದಲ್ಲೂ ಕಾವ್ಯಗಳಲ್ಲೂ ಮೆರೆಸಿ ಅವನು ರೋಮನ್ ನಾಗರಿಕತೆಯ ಶಿಲ್ಪಿಗಳಲ್ಲಿ ಒಬ್ಬನಾದ. ಶುದ್ಧವೂ ಬಲಿಷ್ಠವೂ ಆದ ಲ್ಯಾಟಿನ್ ಭಾಷೆಯ ಬಳಕೆಯಿಂದಲೂ ನೀವಿಯಸ್ಸಿಗೆ ಕೀರ್ತಿ. ಬೇಕಾದಷ್ಟು ಸಾಹಿತ್ಯವನ್ನು ಅವನು ದೀರ್ಘಕಾಲ ಎಡೆಬಿಡದೆ ರಚಿಸಿದ. ಚೂರುಪಾರು ಮಾತ್ರ ಈಚಿನವರಿಗೆ ಉಳಿದು ಬಂದಿರುವುದು ವಿಷಾದ ತರುವ ಸಂಗತಿ.				(ಎಸ್.ವಿ.ಆರ್.)
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ